ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ: ಹೊಸಗನ್ನಡ ಅರುಣೋದಯದ (19ನೆಯ ಶತಮಾನ) ಆದ್ಯಲೇಖಕರು. ಹೊಸಗನ್ನಡದ ಪ್ರಪ್ರಥಮ ಸಾಮಾಜಿಕ ನಾಟಕ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ಎಂಬ ನಾಟಕದ ಕರ್ತೃ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕರ್ಕಿಯವರು. ಸೂರಿ ಎಂಬ ಬಿರುದು ವೈದಿಕ ಕರ್ಮಕಾಂಡಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಇವರ ಮನೆತನಕ್ಕೆ ಶ್ರೀ ಗುರುಪೀಠದಿಂದ ದೊರೆತದ್ದು. ಇವರ ತಂದೆ ವಿಘ್ನೕಶ್ವರ ಶಾಸ್ತ್ರಿಗಳೂ ದೊಡ್ಡ ಪಂಡಿತರು. ವೆಂಕಟರಮಣಶಾಸ್ತ್ರಿಯವರು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕರ್ಕಿಯಲ್ಲಿ ಮುಗಿಸಿ, ಹೊಸನಗರದ ಬಳಿ ಇರುವ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಪಡೆದರು. ಅಲ್ಲಿ ಕಾವ್ಯ, ವ್ಯಾಕರಣ, ಅಲಂಕಾರ, ವೇದಾಂತಗಳನ್ನು ಅಧ್ಯಯನ ಮಾಡಿ ಶ್ರೀಗಳ ಪ್ರೀತಿಗೆ ಪಾತ್ರರಾದರು. ಇವರು ಕೆಲವು ಕಾಲ ಮಠದ ಪಾರುಪತ್ಯಗಾರರಾಗಿಯೂ ಕೆಲಸ ಮಾಡಿದರು. ಮೈಸೂರು ಸಂಸ್ಥಾನದಲ್ಲಿ ಫೌಜುದಾರರಾಗಿ ಅನುಭವ ಪಡೆದ ಇವರು ಯಾವ ಹುದ್ದೆಯಲ್ಲಿಯೂ ಬಹುಕಾಲ ಮುಂದುವರೆಯಲಿಲ್ಲ. ಗೆಳಯ ಬೂದಿ ಮಹಾಬಲಭಟ್ಟರೊಂದಿಗೆ ಸೇರಿ ‘ಶಾಸ್ತ್ರೀ ಕಂಪನಿ’ ಮಾಡಿಕೊಂಡು ಊರೂರು ತಿರುಗಿ ಹವ್ಯಕ ಬಾಂಧವರಿಂದ ನಿಧಿ ಸಂಗ್ರಹಿಸಿಕೊಂಡು ಮುಂಬಯಿಯಲ್ಲಿ ಭಾರತೀ ಛಾಪಖಾನೆಯನ್ನು ಸ್ಥಾಪಿಸಿದರು. ಕನ್ನಡದಲ್ಲಿ ಗ್ರಂಥರಚನೆ, ಗ್ರಂಥ ಸಂಪಾದನೆ ಮತ್ತು ಪ್ರಕಟಣೆ ಅಂದಿನ ಇವರ ಗುರಿಯಾಗಿತ್ತು. ಕರಾವಳಿಯ ಅಕ್ಕಸಾಲಿಗರಿಂದ ಕನ್ನಡ ಅಕ್ಷರಗಳನ್ನು ಕೆತ್ತಿಸಿ ಅನೇಕ ಶಾಸ್ತ್ರ ಗ್ರಂಥಗಳನ್ನೂ ಕಾವ್ಯಗಳನ್ನೂ ಅಚ್ಚು ಹಾಕಿಸಿದರು. ಶಂಕರಸಂಹಿತೆ, ಮನುಸ್ಮೃತಿ, ಯೋಗವಾಸಿಷವಿ, ದುರ್ಗಾಸಪ್ತಶತಿ, ಸಹಸ್ರನಾಮಾವಳಿ, ಪೂಜಾಸಮುಚ್ಚಯ, ತುರಂಗಭಾರತ ಮುಂತಾದವು ಕೆಲವು ಮುಖ್ಯಕೃತಿಗಳು.

	
ಹವ್ಯಕರ ಇತಿಹಾಸ, ಧರ್ಮ ಮತ್ತು ಮಠಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಅನೇಕ ಯಕ್ಷಗಾನ ಕೃತಿಗಳನ್ನೂ ಇವರು ಮುದ್ರಿಸಿ ಪ್ರಕಟಿಸಿದರು. ಸ್ವತಃ ಕೆಲವು ಕೃತಿಗಳನ್ನು ರಚಿಸಿದರು. ದಕ್ಷಿಣಯಾತ್ರಾ ಚರಿತ್ರೆ, ಪ್ರಾಚೀನ ನಾಟ್ಯ ಕಥಾರ್ಣವ, ಅನಾರ್ಯವಿವರ (1887) ಇವು ಮುಖ್ಯವಾದವು. ‘ದಕ್ಷಿಣ ಯಾತ್ರಾ ಚರಿತ್ರೆ’ ಹದಿಮೂರು ಪುಟಗಳ ಒಂದು ಚಿಕ್ಕ ಗ್ರಂಥವಾದರೂ ಐತಿಹಾಸಿಕವಾಗಿ ಕನ್ನಡದ ಪ್ರಥಮ ಪ್ರವಾಸಸಾಹಿತ್ಯ ಕೃತಿಯಾಗಿದೆ. ಹೀಗೆಯೇ ಇವರು ಪ್ರಕಟಿಸಿದ ಕಿಬ್ಬಚ್ಚಲು ಮಂಜಮ್ಮನ ವೇದಾಂತ ತತ್ತ್ವಸರಸಾ ಕನ್ನಡದಲ್ಲಿ ಮುದ್ರಣಗೊಂಡ ಮೊದಲ ಮಹಿಳಾಕೃತಿ.
	
ಕನ್ನಡ ಪತ್ರಿಕೋದ್ಯಮದಲ್ಲಿಯೂ ಇವರದು ಮಹತ್ತ್ವದ ಹೆಸರು. ಇವರು ಹವ್ಯಕ ಸುಬೋಧ ಎಂಬ ವಾರ ಪತ್ರಿಕೆಯನ್ನೂ (1885) ಹಿತೋಪದೇಶ (1888) ಎಂಬ ಮಕ್ಕಳ ಮಾಸಪತ್ರಿಕೆಯನ್ನೂ ಪ್ರಾರಂಭಿಸಿದರು. ಇವು ಆ ಕಾಲಕ್ಕೆ ಬಹಳ ಜನಪ್ರಿಯ ಪತ್ರಿಕೆಗಳೆನ್ನಿಸಿ ಕೊಂಡಿದ್ದವು. ನಿಬಿರ್sಡೆ ವ್ಯಕ್ತಿತ್ವದ ವೆಂಕಟರಮಣಶಾಸ್ತ್ರಿಯವರಿಂದ ಅಂದಿನ ಬ್ರಟಿಷರ ಆಡಳಿತ ನೀತಿ ಮತ್ತು ಅಧಿಕಾರಿಗಳ ದುರ್ವರ್ತನೆಗಳು ಕಟುಟೀಕೆಗೆ ಒಳಗಾದವು. ಅರಣ್ಯ ಇಲಾಖೆಯ ಅವ್ಯವಹಾರಗಳನ್ನೆಲ್ಲ ಬಯಲಿಗೆಳೆದಿದ್ದರಿಂದಾಗಿ ಪ್ರಾಯಶಃ ಇವರ ಮೇಲೆ ಖಟ್ಲೆ ಜರುಗಿ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಇವರಿಗೆ ಜೈಲು ಶಿಕ್ಷೆ ವಿಧಿಸಲ್ಪಟ್ಟಿತು. ಹೀಗೆ ರಾಜಕೀಯ ಕಾರಣಕ್ಕಾಗಿ ಶಿಕ್ಷೆಗೊಳಗಾದ ಕನ್ನಡ ಲೇಖಕರಲ್ಲಿ ವೆಂಕಟರಮಣಶಾಸ್ತ್ರಿಯವರೇ ಮೊದಲಿಗರು. ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳನ್ನು ಮೊದಲು ಬಳಸಿದವರು ಇವರು. ತಮ್ಮ ಜೀವಿತದ ಕೊನೆಯ ಕೆಲವು ಕಾಲ ಪುಣೆಯಲ್ಲಿ ವೈದ್ಯಕೀಯ ವೃತ್ತಿ ನಡೆಸಿ, ಹುಟ್ಟೂರಿಗೆ ಮರಳಿ ಅನಂತರ ಅಲ್ಲಿಯೇ ನಿಧನರಾದರು (ನೋಡಿ: ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ).	 (ಎಸ್.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ